ಹಲವು ಪ್ರಥಮಗಳ ಚಾಲಿಪೋಲಿಲು ಅಕ್ಟೋಬರ್ ೩೧ಕ್ಕೆ ತೆರೆಗೆ
Posted date: 29 Wed, Oct 2014 – 09:58:41 AM

ಮಂಗಳೂರು: ತುಳುಚಿತ್ರರಂಗದಲ್ಲಿ ವ್ಯಾಪಕ ಕುತೂಹಲ ಕೆರಳಿಸಿರುವ, ತುಳು ಅಭಿಮಾನಿಗಳ ಬಹು ನಿರೀಕ್ಷೆಯ ಚಾಲಿಪೋಲಿಲು ಸಿನಿಮಾ ಅಕ್ಟೋಬರ್ ೩೧ಕ್ಕೆ ತೆರೆಗೆ ಬರಲಿದೆ. ಮಂಗಳೂರಿನಲ್ಲಿ ಜ್ಯೋತಿ, ಭಾರತ್ ಮಾಲ್‌ನಲ್ಲಿ ಬಿಗ್ ಸಿನಿಮಾ, ಸಿಟಿಸೆಂಟರ್‌ನಲ್ಲಿ ಸಿನಿಪೊಲಿಸ್, ಮೂಡಬಿದ್ರೆಯಲ್ಲಿ ಅಮರಶ್ರೀ, ಬಿ.ಸಿ.ರೋಡ್‌ನಲ್ಲಿ ನಕ್ಷತ್ರಾ ಬೆಳ್ತಂಗಡಿಯಲ್ಲಿ ಭಾರತ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ , ಮಣಿಪಾಲದಲ್ಲಿ ಇನೋಕ್ಸ್,   ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಚಾಲಿಪೋಲಿಲು ಸಿನಿಮಾ ಬಿಡುಗಡೆಗೊಳ್ಳಲಿದೆ. ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ, ಜಯಕಿರಣ ಫಿಲಂಸ್‌ನ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ ಚಾಲಿಪೋಲಿಲು ಸಿನಿಮಾದಲ್ಲಿ ತುಳುರಂಗ ಭೂಮಿಯ ಖ್ಯಾತ ಕಲಾವಿದರು ನಟಿಸಿದ್ದಾರೆ.
ತುಳು ರಂಗಭೂಮಿಯ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ತಂದ ಚಾಲಿಪೋಲಿಲು ತುಳು ಸಿನಿಮಾ ಸಮಸ್ತ ತುಳು ಬಾಂಧವರಲ್ಲಿ ಕುತೂಹಲ ಕೆರಳಿಸಲು ಕಾರಣ ಚಿತ್ರದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್ ಹಾಗೂ ಭೋಜರಾಜ್ ವಾಮಂಜೂರು ನಾಯಕರಾಗಿ ನಟಿಸಿರುವುದು. ತುಳು ಸಿನಿಮಾದಲ್ಲಿ ಈ ತನಕ ತುಳುರಂಗಭೂಮಿಯ ಮೇರು ಪ್ರತಿಭೆಗಳು ಜೊತೆಯಾಗಿ ನಟಿಸಿರಲಿಲ್ಲ. ಚಾಲಿಪೋಲಿಲು ಸಿನಿಮಾ ಈ ಅಪವಾದವನ್ನು ದೂರ ಮಾಡಲಿದೆ.
ತುಳು ರಂಗಭೂಮಿಯ ಮಹಾನ್ ಪ್ರತಿಭೆಗಳಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸುಂದರ ರೈ ಮಂದಾರ, ತುಳು ಹಾಗೂ ಕನ್ನಡ ನಟ ರಾಘವೇಂದ್ರ ರೈ ಮೊದಲಾದ ಪ್ರತಿಭೆಗಳು ಚಾಲಿಪೋಲಿಲು ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಕನ್ನಡದ ಖ್ಯಾತ ಪೋಷಕ ನಟಿ. ಮುಂಗಾರು ಮಳೆ ಖ್ಯಾತಿಯ ಪದ್ಮಜಾರಾಮ್ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಿದ ಮೊದಲ ತುಳು ಸಿನಿಮಾವೂ ಇದಾಗಿದೆ. ತುಳು ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಾಯಕ ಅರ್ಜುನ್ ಕಾಪಿಕಾಡ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸ್ಥಳೀಯ ಪ್ರತಿಭೆ ಸುರೇಂದ್ರ ಬಂಟ್ವಾಳ ಅವರ ವಿಭಿನ್ನ ಪಾತ್ರವಿದೆ. ಒಂದೇ ಸಿನಿಮಾದಲ್ಲಿ ದಕ್ಷಿಣ ಕನ್ನಡ ಮೂಲದ ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಹಾಗೂ ಮಣಿಕಾಂತ್ ಕದ್ರಿ ಕೆಲಸ ಮಾಡಿದ್ದಾರೆ. ತಾಂತ್ರಿಕ ನಿರ್ದೇಶಕರಾಗಿ ಮಾಧವ ಶೆಟ್ಟಿ ಸುರತ್ಕಲ್ ದುಡಿದಿದ್ದಾರೆ. ೧೦೦ಕ್ಕೆ  ೧೦೦ಶೇಕಡಾ ಮನರಂಜನೆಯ ಅಪ್ಪಟ ತುಳು ಸಿನಿಮಾವಾಗಿದ್ದು, ಸ್ಥಳೀಯ ರಂಗಪ್ರತಿಭೆಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ತುಳುಚಿತ್ರರಂಗದಲ್ಲಿ ಮೊದಲ ಬಾರಿಗೆ ಎರಡು ಕ್ಯಾಮರಾ ಬಳಸಿಕೊಳ್ಳಲಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರರಂಗದ ಪ್ರತಿಭಾವಂತ ಕ್ಯಾಮರಾಮ್ಯಾನ್ ಉತ್ಪಲ್ ನಾಯನಾರ್ ಅವರ ಛಾಯಾಗ್ರಹಣದ ಮೊದಲ ತುಳು ಸಿನಿಮಾ ಇದಾಗಿದೆ. ಚೇತನ್ ರೈ ಮಾಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ದಯಾನಂದ ಕುಲಾಲ್, ಪ್ರದೀಪ್ ಆಳ್ವ, ರವಿ ಸುರತ್ಕಲ್, ಸರೋಜಿನಿ ಶೆಟ್ಟಿ, ಶೋಭಾ ರೈ, ಸುಮಿತ್ರಾ ರೈ, ಆಗ್ನಲ್, ತಿಮ್ಮಪ್ಪ ಕುಲಾಲ್, ಮಂಗೇಶ್ ಭಟ್, ಪಾಂಡುರಂಗ ಅಡ್ಯಾರ್, ಕರುಣಾಕರ ಸರಿಪಲ್ಲ, ಸುರೇಶ್ ಕುಲಾಲ್,  ಸೋಮು ಜೋಗಟ್ಟೆ., ಸುಜಾತ, ವಿದ್ಯಾಶ್ರೀ, ರಶ್ಮಿಕಾ, ಪಾರ್ವತಿ ಹಾಗೂ ಉಮಾನಾಥ್ ಕೋಟ್ಯಾನ್, ಗಿರೀಶ್ ಶೆಟ್ಟಿ ಪೆರ್ಮುದೆ, ಕರ್ನೂರ್ ಮೋಹನ್ ರೈ ಮತ್ತು ಐಟಂ ಸಾಂಗ್‌ನಲ್ಲಿ ವಿದೇಶಿ ನೃತ್ಯ ಗಾರ್ತಿಯರು ನಟಿಸಿದ್ದಾರೆ. ಎರಡು ಗಂಟೆ ೨೩ ನಿಮಿಷದ ಸಂಪೂರ್ಣ ಕಾಮಿಡಿ ಚಿತ್ರವಾಗಿದ್ದರೂ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಥೆ ಹೊಂದಿದೆ. ತುಳು ಚಿತ್ರರಂಗ ಮೊದಲ ಬಾರಿಗೆ ತುಳುರಂಗ ಭೂಮಿಯ ನೆರಳಿನಿಂದ ಹೊರಬಂದು ತುಳುಚಿತ್ರರಂಗದ ಬಗ್ಗೆ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕುವಂತೆ ಮಾಡುತ್ತದೆ ಎಂದು ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್ ಹೇಳಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed